ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಲಿರುವ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಭಾರೀ ಗಲಾಟೆಗೆ ಕಾರಣವಾಗಿದೆ.
ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರ್ಗಳನ್ನು ಅಳವಡಿಸುವ ವೇಳೆ ಜನಾರ್ಧನ ರೆಡ್ಡಿ ನಿವಾಸದ ಬಳಿ ಉದ್ವಿಗ್ನತೆ ಉಂಟಾಗಿದ್ದು, ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ಜನಾರ್ಧನ ರೆಡ್ಡಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ಗಲಾಟೆಯಾಗಿ ಮಾರ್ಪಟ್ಟಿತು. ಪರಿಸ್ಥಿತಿ ತೀವ್ರಗೊಂಡು ಕಲ್ಲು ತೂರಾಟ ಕೂಡ ನಡೆದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಆಗಮಿಸಿದ್ದು, ಆ ಬಳಿಕವೂ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಮುಂದುವರಿದಿದೆ.
ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ, ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಎರಡುವರೆ ವರ್ಷಗಳಲ್ಲಿ ಭರತ್ ರೆಡ್ಡಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮವನ್ನು ಅಬ್ಬರದಿಂದ ಮಾಡುತ್ತಿದ್ದಾರೆ. ನಮ್ಮ ಮನೆಯ ಮುಂದೆ ಬಂದು ಬ್ಯಾನರ್ ಕಟ್ಟಲು ಯತ್ನಿಸಿದ್ದಾರೆ. ಇದಕ್ಕೆ ನಮ್ಮ ಸೆಕ್ಯುರಿಟಿ ಗಾರ್ಡ್ಗಳು ಅಕ್ಷೇಪ ವ್ಯಕ್ತಪಡಿಸಿದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ಆರೋಪಿಸಿದರು.
“ಸತೀಶ್ ರೆಡ್ಡಿ ಗನ್ ಮ್ಯಾನ್ಗಳೊಂದಿಗೆ ನಮ್ಮ ಮನೆಯ ಮುಂದೆ ಬಂದಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮನ್ನು ಅಂತ್ಯ ಮಾಡಲು ಪ್ರಯತ್ನಿಸಲಾಗಿದೆ. ನಾನು ಗಂಗಾವತಿಯಿಂದ ಬರುವುದನ್ನೇ ಕಾಯುತ್ತಿದ್ದರು. ನಾನು ಬಂದ ತಕ್ಷಣ ಅವರ ಗನ್ ಮ್ಯಾನ್ಗಳು ಫೈರಿಂಗ್ ಮಾಡಿದ್ದಾರೆ. ಬುಲೆಟ್ಗಳು ಸಿಕ್ಕಿವೆ. ಈ ಬಗ್ಗೆ ದೂರು ಸಲ್ಲಿಸುತ್ತೇನೆ” ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಭರತ್ ರೆಡ್ಡಿ ಹಾಗೂ ಅವರ ತಂದೆ ವಿರುದ್ಧ ಪೊಲೀಸರಿಗೆ ದೂರು ದಾಖಲಿಸುವುದಾಗಿ ಜನಾರ್ಧನ ರೆಡ್ಡಿ ಸ್ಪಷ್ಟಪಡಿಸಿದರು.
“ಬಳ್ಳಾರಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಗುಂಡಾಗಿರಿ, ದೌರ್ಜನ್ಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಜನರೇ ಇವರನ್ನು ಮನೆಗೆ ಕಳುಹಿಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದಲ್ಲಿ ಭದ್ರತೆ ಹೆಚ್ಚಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

