ಅಭಿವೃದ್ಧಿ, ಇಲ್ಲವೇ ಪ್ರತ್ಯೇಕ ರಾಜ್ಯ – ಶಾಸಕ ರಾಜು ಕಾಗೆ ಅವಾಜ್

ಬೆಳಗಾವಿ

ಬೆಳಗಾವಿ- ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಶಾಸಕ ರಾಜು ಕಾಗೆ ಗಟ್ಟಿಯಾದ ಧ್ವನಿ ಎತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಸಮರ್ಪಕ ಅಭಿವೃದ್ಧಿ ಒದಗಿಸಬೇಕು, ಇಲ್ಲದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಅನಿವಾರ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ಓಲ್ಡ್ ಪಿಬಿ ರಸ್ತೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರಾಜು ಕಾಗೆ, “ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮುಂದುವರಿದಿದೆ. ಇದನ್ನು ತಕ್ಷಣವೇ ಹೋಗಲಾಡಿಸಬೇಕು. ಕಿತ್ತೂರು ಕರ್ನಾಟಕ ಭಾಗಕ್ಕೆ ಸಮಾನ ಅಭಿವೃದ್ಧಿ ಸಿಗಬೇಕು” ಎಂದು ಒತ್ತಾಯಿಸಿದರು.

ಪ್ರತ್ಯೇಕ ರಾಜ್ಯದ ಬೇಡಿಕೆ ಕುರಿತು ಮಾತನಾಡಿದ ಅವರು, “ಈ ಹೋರಾಟಕ್ಕೆ ನನಗೆ ಬೆಂಬಲ ನೀಡುವವರಿಗಿಂತ ವಿರೋಧಿಸುವವರೇ ಹೆಚ್ಚು. ಬಹುತೇಕ ಶಾಸಕರು ಹೆದರಿದ್ದಾರೆ. ಸಚಿವ ಸ್ಥಾನ ಕೈ ತಪ್ಪುವ ಭೀತಿ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಹೋಗುವ ಆತಂಕ ನಮ್ಮ ಶಾಸಕರಲ್ಲಿ ಇದೆ” ಎಂದು ಆರೋಪಿಸಿದರು.

“ನಾವು ಹೋರಾಟ ಮಾಡಿದರೆ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಬೇಡಿಕೆ ಈಡೇರಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಸರ್ಕಾರ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಬೇಕು, ಇಲ್ಲವೇ ಪ್ರತ್ಯೇಕ ರಾಜ್ಯ ರಚನೆಗೆ ಮುಂದಾಗಬೇಕು” ಎಂದು ಶಾಸಕ ರಾಜು ಕಾಗೆ ಎಚ್ಚರಿಕೆ ನೀಡಿದರು.

ಈ ಹೇಳಿಕೆಯಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಪ್ರತ್ಯೇಕ ರಾಜ್ಯದ ವಿಚಾರ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಬಂದಿದೆ.