ಬೆಳಗಾವಿ- ಡಿಕೆ ಶಿವಕುಮಾರ್‌ಗೆ ಹೈಕಮಾಂಡ್‌ನಿಂದ ಕರೆ ಬಂದಿದೆ ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಡಿಕೆಶಿ–ಸಿದ್ದರಾಮಯ್ಯ ನಡುವಿನ ಸಂಬಂಧವನ್ನು ಟಾಸ್‌ಗೆ ಹೋಲಿಸಿ ಮಾರ್ಮಿಕವಾಗಿ ಮಾತನಾಡಿದ್ದಾರೆ.
“ಈ ವಿಚಾರದಲ್ಲಿ ಅವರನ್ನೇ ಕೇಳಬೇಕು, ನಾವೇನೂ ಹೇಳುವುದಿಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಕ್ಯಾಪ್ಟನ್‌ಗಳು. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಆಗಿದಂತೆ ಇದು. ನಾವು ಕ್ಯಾಪ್ಟನ್ ಸ್ಥಾನದಲ್ಲಿಲ್ಲ. ಆಗ ಥರ್ಡ್ ಅಂಪೈರ್ ಕೂಡ ಇರಲಿಲ್ಲ. ಹೆಡ್ ಬಿದ್ದಿದೆಯೋ, ಟೆಲ್ ಬಿದ್ದಿದೆಯೋ ಅನ್ನೋದನ್ನ ಅವರಿಬ್ಬರನ್ನೇ ಕೇಳಬೇಕು” ಎಂದು ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದ್ರು.
ಇದನ್ನೆಲ್ಲಾ ನಡುವೆಯೇ, ಹೈಕಮಾಂಡ್ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಒಳ ವಿಚಾರಗಳ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಶಿಸ್ತು ಮತ್ತು ಒಗ್ಗಟ್ಟಿಗೆ ಬದ್ಧರಾಗಿರುವುದಾಗಿ ಡಿಕೆಶಿ ಹೇಳಿದ್ದಾರೆ.
ಇತ್ತ, ಹುದಲಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪವಾಗುತ್ತಿದ್ದಂತೆ “ಹೇ ಯಾರೀ ಅದು?” ಎಂದು ಗದರಿದಂತೆ ಪ್ರತಿಕ್ರಿಯಿಸಿ, ಯಾವುದೇ ಹೇಳಿಕೆ ನೀಡದೇ ಸ್ಥಳದಿಂದ ಹೊರಟರು.

