ಡಿಸಿ ವಿರುದ್ಧದ ದೂರು ಕಮಿಟಿ ಮುಂದೆ ಚರ್ಚೆ – ಸಚಿವ ಸತೀಶ್ ಜಾರಕಿಹೊಳಿ

ರಾಜ್ಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಲೋಕಸಭಾ ಸ್ಪೀಕರ್ ಅವರಿಗೆ ಮಹಾ ಸಂಸದ ಧೈರ್ಯಶೀಲ ಮಾನೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ಅವರು ದೂರು ನೀಡಿದ್ದಾರೆ ಅಷ್ಟೇ. ಈ ವಿಚಾರ ಕಮಿಟಿ ಮುಂದೆ ಹೋಗಿ ಚರ್ಚೆಯಾಗಬೇಕು. ನಮ್ಮ ಪ್ರಕಾರ ಜಿಲ್ಲಾಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ” ಎಂದು ಹೇಳಿದರು.
ಡಿ.ಸಿ ಅವರಿಗೆ ನೋಟೀಸ್ ನೀಡುವ ಬಗ್ಗೆ ಮಾತನಾಡಿದ ಸಚಿವರು, “ನೋಟೀಸ್ ಬಂದರೆ ಕಾನೂನು ರೀತಿ ಹೋರಾಟ ಮಾಡುತ್ತೇವೆ. ಎಷ್ಟರ ಮಟ್ಟಿಗೆ ನೋಟೀಸ್ ನೀಡಲಾಗಿದೆ ಎಂಬುದನ್ನು ನೋಡಬೇಕು. ಗಂಭೀರ ನೋಟೀಸ್ ಇದ್ದರೆ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತೇವೆ. ನೋಟೀಸ್ ಬಂದ ಬಳಿಕವೇ ತೀರ್ಮಾನ ಮಾಡೋಣ” ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದ
ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, “ಮಹಾಜನ್ ವರದಿ ಪ್ರಕಾರ ಕ್ಯಾಂಪ್ ಸೇರಿದಂತೆ ಬೆಳಗಾವಿಯ ಬಹಳಷ್ಟು ಭಾಗ ಹೋಗಬೇಕು ಎಂದು ಹೇಳಲಾಗಿದೆ. ಆದರೆ ಈಗ ಅದೇನು ಆಗಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು” ಎಂದರು.
ಬೆಳಗಾವಿ ನಗರದಲ್ಲಿ ಪ್ಲೈಓವರ್ ನಿರ್ಮಾಣ
ಬೆಳಗಾವಿ ನಗರದಲ್ಲಿ ಪ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವರು ಮಾಹಿತಿ ನೀಡಿದ್ದು, “ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ಲೈಓವರ್ ಯೋಜನೆಗೆ ಅನುಮೋದನೆ ದೊರೆತಿದೆ. ಫೆಬ್ರುವರಿ ಅಂತ್ಯದೊಳಗೆ ಕಾಮಗಾರಿ ಆರಂಭಿಸಲಾಗುತ್ತದೆ. 275 ಕೋಟಿ ರೂ. ವೆಚ್ಚದಲ್ಲಿ ಯಾವುದೇ ಭೂಸ್ವಾಧೀನವಿಲ್ಲದೇ ಪ್ಲೈಓವರ್ ನಿರ್ಮಿಸಲಾಗುವುದು. ಇದು ಮಾದರಿ ಪ್ಲೈಓವರ್ ಆಗಿರಲಿದೆ. ಎರಡು ಹಂತಗಳಲ್ಲಿ ಕಾಮಗಾರಿ ನಡೆಸಲಾಗುತ್ತದೆ” ಎಂದು ಹೇಳಿದರು.

ಸತೀಶ್ ಜಾರಕಿಹೊಳಿ, ಸಚಿವ