ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಭಜರಂಗ ದಳದ ಕಾರ್ಯಕರ್ತರ ನಡುವೆ ನಡೆದ ಗಲಾಟೆ ರೌಡಿಗೇರಿದ್ದು, ಕಾಂಗ್ರೆಸ್ ಕಾರ್ಯಕರ್ತ ಗಣೇಶ್ (40) ಮಚ್ಚಿನ ದಾಳಿಯಲ್ಲಿ ಸಾವಿಗೀಡಾದ ಘಟನಾ ಸಖರಾಯಪಟ್ಟಣದಲ್ಲಿ ನಡೆದಿದೆ.
ಘಟನೆ ಕಲ್ಮುರುಡೇಶ್ವರ ಮಠದ ಬಳಿಯಲ್ಲಿ ರಾತ್ರಿ ವೇಳೆ ನಡೆದಿದ್ದು, ದತ್ತ ಜಯಂತಿಗೆ ಶುಭಕೋರಲು ಬ್ಯಾನರ್ ಹಾಕುವ ವಿಷಯದ ಕುರಿತಾದ ವಿವಾದವೇ ಜಗಳಕ್ಕೆ ಕಾರಣವಾಗಿರುವುದಾಗಿ ಮೂಲಗಳು ತಿಳಿಸಿವೆ. ಬಾರ್ ಪ್ರದೇಶದ ಬಳಿ ಎರಡೂ ಗುಂಪುಗಳ ನಡುವೆ ಮೊದಲ ಗಲಾಟೆ ನಡೆದಿದ್ದು, ನಂತರ ಮಠದ ಬಳಿಯಲ್ಲಿ ಮತ್ತೆ ಮುಖಾಮುಖಿಯಾಗಿ ಪರಸ್ಪರ ದಾಳಿ ನಡೆಸಿಕೊಂಡಿವೆ.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಮೇಲೆ ಮಚ್ಚಿನಿಂದ ತೀವ್ರ ಹಲ್ಲೆ ನಡೆಯಿತು. ಹೊಡೆತದ ತೀವ್ರತೆಗೆ ಸ್ಥಳದಲ್ಲಿಯೇ ಗಣೇಶ್ ಮೃತಪಟ್ಟಿದ್ದಾರೆ. ಎದುರಾಳಿ ಗುಂಪಿನ ಇಬ್ಬರು ಭಜರಂಗ ದಳದ ಕಾರ್ಯಕರ್ತರಿಗೂ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಮಾಹಿತಿ ಲಭಿಸಿದೆ.
ಮೃತ ಗಣೇಶ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಜಿಲ್ಲೆ ಎಸ್‌ಪಿ ವಿಕ್ರಂ ಅಮ್ಟೆ, “ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಈಗಲೇ ಸ್ಪಷ್ಟವಾಗಿಲ್ಲ. ವಿಚಾರಣೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಕಡೂರು ಶಾಸಕ ಕೆ. ಎಸ್. ಆನಂದ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

